ಬಾರಕರ್ ಶ್ರೇಣಿ
ರಾಣಿಗಂಜ್ ಕಲ್ಲಿದ್ದಲ ಗಣಿಯ ಬಳಿ ಹರಿಯುವ ಬಾರಕರ್ ನದಿಯ ಸಮೀಪದಲ್ಲಿ ಚೆನ್ನಾಗಿ ಕಂಡುಬರುವ ಪ್ರಾಚೀನ ಶಿಲಾಪ್ರಸ್ತರ. ಇವು ಯಾವ ತೆರನಾದ ಅವ್ಯವಸ್ಥೆಯನ್ನೂ ತೋರಗೊಡದೆ ಟಾಲ್‍ಚಿರ್ ಶಿಲಾ ಶ್ರೇಣಿಯ ಮೇಲೆ ನಿಕ್ಷೇಪಗೊಂಡಿವೆ. ಹಲವು ಕಡೆ ಈ ಎರಡು ಶಿಲಾವರ್ಗಗಳು ಒಂದರೊಡನೊಂದು ಕ್ರಮವಾಗಿ ಬೆರೆತು ಹೋಗಿವೆ. ಅಂಥ ಪ್ರದೇಶಗಳಲ್ಲಿ ಇವೆರಡೆರ ಮಧ್ಯೆ ಸೀಮಾರೇಖೆ ಎಳೆದು ಗುರುತಿಸಲು ಸಾಧ್ಯವೇ ಇಲ್ಲ. ಆದರೆ ಝರಿಯಾ ಕಲ್ಲಿದ್ದಲ ಗಣಿ ಪ್ರದೇಶದಲ್ಲಿ ಟಾಲ್‍ಚಿರ್-ಬಾರಕರ್ ಶ್ರೇಣಿಗಳ ನಡುವೆ ಸೀಮಾವಿಳಂಬವನ್ನು ಸ್ಪಷ್ಟವಾಗಿ ಗುರುತಿಸಬಹುದು. ಹೀಗೆಯೇ ಕರನ್‍ಪುರ ಪ್ರದೇಶದಲ್ಲಿ ಬಾರಕರ್ ಶಿಲಾಪ್ರಸ್ತರಗಳು ಟಾಲ್‍ಚಿರ್ ವರ್ಗದ ಶಿಲೆಗಳೇ ಇಲ್ಲದೆ ನೇರವಾಗಿ ಆರ್ಷೇಯ ಯುಗದ ಶಿಲೆಗಳ ಮೇಲೆ ನಿಕ್ಷೇಪಗೊಂಡಿರುವುದು ಸುಸ್ಪಷ್ಟವಾಗಿದೆ.

ಝರಿಯಾ ಪ್ರಾಂತದಲ್ಲಿ ಬಾರಕರ್ ಶ್ರೇಣಿಯ ಮಂದ ಸುಮಾರು 600 ಮೀಟರುಗಳಿಗಿಂತಲೂ ಜಾಸ್ತಿ ಇದೆ. ರಾಣಿಗಂಜ್‍ನಲ್ಲಿ ಈ ಶಿಲಾ ಶ್ರೇಣಿಯ ಮಂದ ಸುಮಾರು 600 ಮೀ. ಕರನ್‍ಪುರ ಪ್ರದೇಶದಲ್ಲಿ ಸುಮಾರು 450 ಮೀ. ಬಹುಶಃ ರಾಮಘರ್ ಬಳಿ ಇವು ಅತ್ಯಂತ ಹೆಚ್ಚು ಮಂದವಾಗಿ ಅಂದರೆ ಸುಮಾರು 900 ಮೀಟರುಗಳಷ್ಟಿದೆ ಎನ್ನಬಹುದು. ಹೀಗಿದ್ದರೂ ಕೆಲವು ಪ್ರದೇಶಗಳಲ್ಲಿ, ಉದಾಹರಣೆಗೆ ಚತ್ತೀಸ್‍ಘರ್‍ನ ಬಿಸ್ರಾಂಪುರದ ಬಳಿ, ಇವು 150 ಮೀ, ಗೋದಾವರಿ ಕಣಿವೆಯ ಚಾಂದಾ ಬಳಿ ಕೇವಲ 75 ಮೀ ಮತ್ತು ಭದ್ರಾಚಲಮ್ ಬಳಿ 180 ಮೀ. ಮಂದವಾಗಿವೆ.

ಬಾರಕರ್ ವರ್ಗದ ಶಿಲೆಗಳ ಕಣರಚನೆ ರಾಣಿಗಂಜ್ ವರ್ಗದ ಶಿಲೆಗಳದ್ದಕ್ಕಿಂತ ದಪ್ಪ, ಇವು ಸಹ ಗೊಂಡ್ವಾನಯುಗದ ಇತರ ಶಿಲಾಶ್ರೇಣಿಗಳಂತೆ ಗುಂಡುಶಿಲೆ, ಮರಳುಶಿಲೆ, ನುರುಜುಶಿಲೆ, ಜೇಡುಶಿಲೆ ಮತ್ತು ಕಲ್ಲಿದ್ದಲಿನ ಸ್ತರಗಳಿಂದ ಕೂಡಿವೆ. ಕದಂಬಶಿಲೆಯಲ್ಲಿಯ (ಗುಂಡುಶಿಲೆ) ಪೆಂಟೆಗಳ ಪೈಕಿ ಕೆಲವು ಗಾತ್ರದಲ್ಲಿ ದೊಡ್ಡವು. ಅವುಗಳ ಅಗಲ 25 ಸೆಂಮೀಗೂ ಜಾಸ್ತಿ ಇದೆ. ಅಲ್ಲದೆ ಅವು ಧಾರವಾಡ ಯುಗದ ಶಿಲೆಗಳಿಂದ ಉಂಟಾದವೆಂಬುದನ್ನೂ ಸೂಚಿಸುತ್ತವೆ. ಬಾರಕರ್ ಕದಂಬಶಿಲೆಯಲ್ಲಿ ಸಾಮಾನ್ಯವಾಗಿ ಗಾತ್ರದಲ್ಲಿ ಸಣ್ಣದಾದ ಮತ್ತು ಆಕಾರದಲ್ಲಿ ಗುಂಡಾಗಿರುವ ಬಿಳಿಯಬಣ್ಣದ ಬೆಣಚಿನ ಪೆಂಟೆಗಳನ್ನು ಕಾಣಬಹುದು. 
ಭಾರತದಲ್ಲಿ ಕಲ್ಲಿದ್ದಲ ನಿಕ್ಷೇಪಗಳು ದೊರೆಯುವ ರೀತಿಯನ್ನು ವಿವೇಚಿಸುವಾಗ ಬಾರಕರ್ ಶಿಲಾಶ್ರೇಣಿಗೆ ಪ್ರಮುಖ ಸ್ಥಾನ ನೀಡಬೇಕು. ಇದರಲ್ಲಿ ನಾನಾ ದರ್ಜೆಯ ಮತ್ತು ನಾನಾ ಬಗೆಯ ಕಲ್ಲಿದ್ದಲನ್ನು ಕಾಣಬಹುದು. ಬಾರಕರ್ ಶಿಲಾ ಶ್ರೇಣಿಯಲ್ಲಿ ಪ್ರಾಚೀನ ಸಸ್ಯಾವಶೇಷಗಳನ್ನು ನೋಡುತ್ತೇವೆ. ಇವುಗಳಲ್ಲಿ ಸ್ಫಿನೋಫಿಲ್ಲಮ್ ಮತ್ತು ಸೈಕ್ಯಾಡೊಫೈಟ ಮುಖ್ಯವಾದುವು. ಅಲ್ಲದೆ ಈಕ್ವಿಸಿಟೇಲುಗಳ ವರ್ಗಕ್ಕೆ ಸೇರಿದ ಫಿಲ್ಲೋಥಿಕಾ ಸಹ ಈ ಶಿಲೆಗಳ ವಿಶಿಷ್ಟ ಜೀವ್ಯವಶೇಷ. ಮಿರ್ಜಾಪುರದ ಬಳಿ ದೊರೆಯುವ ಬಾರಕರ್ ಶ್ರೇಣಿಯ ಶಿಲೆಗಳಲ್ಲಿ ಬೀಜಕಣಗಳೂ ಮೆತುಗಂಟುಗಳೂ ಕಂಡು ಬಂದಿವೆ.	(ಬಿ.ವಿ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ